ಇ-ವಾರಪತ್ರಿಕೆ ‘ಗೋವಾಣಿ’ ಲೋಕಾರ್ಪಣೆ
ಪ್ರಾಣ ಕೊಟ್ಟಾದರೂ ಗೋವಿನ ಪ್ರಾಣ ಉಳಿಸಲು ಪಣ: ರಾಘವೇಶ್ವರ ಶ್ರೀ
* ಹರಿಹರಪುರ ಶ್ರೀ, ಆವನಿ ಶೃಂಗೇರಿ ಶ್ರೀ, ಶಾಸಕ ಗೋಪಾಲಯ್ಯ, ನಟರಾದ ಅಜಯ್ ರಾವ್ ಉಪಸ್ಥಿತಿ
ಬೆಂಗಳೂರು: ಮಲೆಮಹದೇಶ್ವರ ಬೆಟ್ಟದ ಒಂದೇ ಒಂದು ಗೋವು ಕೂಡಾ ಕಟುಕರ ಪಾಲಾಗದಂತೆ ತಡೆಯಲು ತಮಿಳುನಾಡಿನ ಆಡಿಜಾತ್ರೆಗೆ ಪರ್ಯಾಯವಾಗಿ ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ಅಭಯ ಜಾತ್ರೆಯನ್ನು ಈ ತಿಂಗಳ 11ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಪ್ರಕಟಿಸಿದರು.
ಮಹಾಲಕ್ಷ್ಮಿಪುರಂ ವಿವೇಕಾನಂದ ಮೈದಾನದಲ್ಲಿ ನಡೆದ ಅಭಯಾಕ್ಷರ- ಹಾಲುಹಬ್ಬದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಗೋಸಂರಕ್ಷಣೆ ಸಲುವಾಗಿ ಇಡೀ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಇಂಥ ಜಾತ್ರೆ ನಡೆಯುತ್ತಿದೆ. ತಮಿಳುನಾಡಿನ ಈರೋಡು ಜಿಲ್ಲೆಯ ಅಂದಿಯೂರಿನಲ್ಲಿ ಪ್ರತಿವರ್ಷ ನಡೆಯುವ ಆಡಿ ಜಾತ್ರೆಯಲ್ಲಿ ಸಾವಿರಾರು ಗೋವುಗಳು ಕಟುಕರಿಗೆ ಮಾರಾಟವಾಗುತ್ತಿದ್ದವು. ಇದನ್ನು ತಪ್ಪಿಸುವುದೇ ಅಭಯಜಾತ್ರೆಯ ಉದ್ದೇಶ ಎಂದು ಹೇಳಿದರು.
ಗೋಆಂದೋಲನವನ್ನು ತಾತ್ವಿಕ ಅಂತ್ಯ ತಲುಪಿಸುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ಗೋವಿಗಾಗಿ ತಲೆ ಕೊಡಲೂ ಸಿದ್ಧ. ಸಾವಿರಾರು ಜಾನುವಾರುಗಳು ಇಂಥ ಪುಣ್ಯಸ್ಥಳದಲ್ಲಿ ಕಟುಕರ ಪಾಲಾಗುತ್ತಿದ್ದರೂ ಅದನ್ನು ತಡೆಯುವ ಪ್ರಾಮಾಣಿಕ ಪ್ರಯತ್ನ ಇದುವರೆಗೆ ನಡೆದಿಲ್ಲ. ಆದರೆ ಈ ಬಾರಿ ಇದನ್ನು ತಡೆಯಲು ಪರ್ಯಾಯವಾಗಿ ಶ್ರೀಮಠ ಅಭಯ ಜಾತ್ರೆ ಹಮ್ಮಿಕೊಂಡಿದೆ ಎಂದು ವಿವರಿಸಿದರು.
ಕಟುಕರಿಗೆ ಗೋವನ್ನು ಮಾರಾಟ ಮಾಡಬೇಡಿ ಎಂದು ಸಲಹೆ ನೀಡಿದರೆ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ಆತನಿಗೆ ಪರ್ಯಾಯ ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಶ್ರೀಮಠ, ಬೆಟ್ಟದ ತಪ್ಪಲಿನ ರೈತರಿಗೆ ಮೂರು ಅವಕಾಶ ನೀಡಿದೆ. ಗೋಮೂತ್ರ, ಗೋಮಯ ಮಾರಾಟ ಮಾಡಿ ಅಥವಾ ಕೆಂಪಯ್ಯನಹಟ್ಟಿಯಲ್ಲಿರುವ ಶ್ರೀಮಠದ ಗೋಬ್ಯಾಂಕ್‍ಗೆ ನೀಡಿ, ತಮಗೆ ಬೇಕೆನಿಸಿದಾಗ ವಾಪಾಸು ಕೊಂಡೊಯ್ಯಲು ಅವಕಾಶವಿದೆ ಎಂಬ ಪರ್ಯಾಯ ಕಲ್ಪಿಸಲಾಗಿದೆ ಎಂದರು. ಇಷ್ಟಾಗಿಯೂ ಜಾನುವಾರು ಮಾರಾಟ ಮಾಡುವುದು ಅನಿವಾರ್ಯವೇ ಆಗಿದ್ದರೆ ನಮಗೇ ಮಾರಾಟ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದರು.
ಇದುವರೆಗೆ ಬೆಟ್ಟದಿಂದ ಯಾವ ಹಸುವನ್ನೂ ಆಡಿ ಜಾತ್ರೆಗೆ ಒಯ್ದಿಲ್ಲ. ಮುಂಗಡ ಹಣ ನೀಡಿದ ಮಧ್ಯವರ್ತಿಗಳೂ ಪಲಾಯನಗೈಯುತ್ತಿದ್ದಾರೆ. ಕಟುಕರಿಗೆ ಮಾರುವ ಹಸುಗಳನ್ನು ಅಭಯ ಜಾತ್ರೆಯಲ್ಲಿ ಗೋಸಾಕಾಣಿಕೆ ಮಾಡುವವರಿಗೆ ಮಾರಾಟ ಮಾಡಿ ಎಂದು ಸಲಹೆ ಮಾಡಿದರು.
ಗೋಸಂರಕ್ಷಣೆಗೆ ಸಹಸ್ರಾರು ವರ್ಷಗಳ ಇತಿಹಾಸವಿದ್ದರೆ, ಗೋಹತ್ಯೆ, ಗೋತಳಿಸಂಕರದ ಅನಿಷ್ಟಗಳು ಇತ್ತೀಚಿನ ಬೆಳವಣಿಗೆ. ಇಂಥ ಅನಿಷ್ಟಗಳು ದೇಶದಲ್ಲಿ ನಡೆಯದಿರಲು ಪ್ರಾಮಾಣಿಕ ಹೋರಾಟ ನಡೆದಿಲ್ಲ ಎಂದು ಹೇಳಿದರು.
ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಶ್ರೀ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿ, “ಭಾರತ ಸಂಸ್ಕøತಿಯಲ್ಲಿ ಗೋವು ಲೌಕಿಕ ಹಾಗೂ ಪಾರಮಾರ್ಥಿಕ ಮಹತ್ವ ಹೊಂದಿದೆ. ಕೃಷಿ ಪ್ರಧಾನ ಭಾರತದಲ್ಲಿ ಗೋವು ಅನ್ನ, ಆಹಾರ, ಆರೋಗ್ಯದ ಮೂಲ. ಇಷ್ಟಾಗಿಯೂ ವಿದೇಶಿ ಆಕ್ರಮಣದ ಬಳಿಕ ಗೋವಿನ ಹೆಸರಿನಲ್ಲಿ ಹಿಂಸೆ, ಸಂಘರ್ಷ ಆರಂಭವಾಗಿದೆ” ಎಂದು ವಿಶ್ಲೇಷಿಸಿದರು. ಗೋಸಂರಕ್ಷಣೆಗೆ ಪೂರಕವಾಗಿ ಪ್ರತಿ ಗ್ರಾಮದಲ್ಲಿ ಕನಿಷ್ಠ 100 ಎಕರೆಯನ್ನು ಗೋಮಾಳಕ್ಕೆ ಮೀಸಲಿಡಬೇಕು ಎಂದು ಸಲಹೆ ಮಾಡಿದರು.
ಎಲ್ಲ ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ಹಸಿರುಪಟ್ಟಿ ಮಾದರಿಯಲ್ಲಿ ಗೋ ಪಟ್ಟಿ (ಕೌ ಬೆಲ್ಟ್) ನಿರ್ಮಿಸಿ ಗೋಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಸಾಹಿತಿ ಚಿಕ್ಕರಂಗೇಗೌಡ ಅಭಿಪ್ರಾಯಪಟ್ಟರು.
ಶ್ರೀ ಅವನಿ ಶೃಂಗೇರಿ ಜಗದ್ಗುರು ಶ್ರೀ ಅಭಿನವವಿದ್ಯಾಶಂಕರಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ಗೋವು ಕಡಿಮೆಯಾದಂತೆಲ್ಲ ಧರ್ಮವೂ ನಶಿಸುತ್ತಿದೆ. ಗೋದಾನ ಸಕಲ ಪಾಪಗಳಿಗೆ ಪ್ರಾಯಶ್ಚಿತ. ಹಸು ಉಳಿದರೆ ಸಂಸ್ಕøತಿ ಉಳಿಯುತ್ತದೆ” ಎಂದು ಹೇಳಿದರು.
ಗೋವಧೆಜನ್ಯ ವಸ್ತುಗಳನ್ನು ಸಮಾಜದ ಪ್ರತಿಯೊಬ್ಬರೂ ತ್ಯಜಿಸುವ ಮೂಲಕ ಗೋವಧೆ ನಿಲ್ಲಿಸಲು ಒಣ ತೊಡಬೇಕು ಎಂದು ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ್ ಮನವಿ ಮಾಡಿದರು.
ಶಾಸಕ ಗೋಪಾಲಯ್ಯ, ಶ್ರೀ ಪರಮಾತ್ಮಾನಂದಗಿರಿ ಸ್ವಾಮೀಜಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಜಿಎಂಪಿ ಸದಸ್ಯರಾದ ಹೇಮಲತಾ ಗೋಪಾಲಯ್ಯ, ಭದ್ರೇಗೌಡ, ನಟ ಅಜಯ್ ರಾವ್ (ಸ್ಯಾಂಡಲ್‍ವುಡ್ ಕೃಷ್ಣ) ಮತ್ತಿತರರು ಉಪಸ್ಥಿತರಿದ್ದರು. ವಿದ್ವಾನ್ ಜಗದೀಶ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಾನಂದ ಶರ್ಮ ನಿರೂಪಿಸಿದರು. ಶ್ರೀಮಠದ ಮಾಧ್ಯಮ ವಿಭಾಗದಿಂದ ಹೊರತಂದ ಗೋವಾಣಿ ಇ-ವಾರಪತ್ರಿಕೆಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಖ್ಯಾತ ಶ್ಯಾಡೋಪ್ಲೇ ಕಲಾವಿದ ಪ್ರಹ್ಲಾದಾಚಾರ್ಯ ತಂಡದಿಂದ ಪುಣ್ಯಕೋಟಿ ಕಥನ ಕುರಿತ ನೆರಳು- ಬೆಳಕಿನ ಪ್ರದರ್ಶನ ಆಯೋಜಿಸಲಾಗಿತ್ತು.

Leave a Comment