ದೇಶ, ಮನುಕುಲದ ಉಳಿವಿಗೆ ಗೋರಕ್ಷಣೆ: ರಾಘವೇಶ್ವರ ಶ್ರೀ
ಬೆಂಗಳೂರು: ದೇಶ, ಸಂಸ್ಕøತಿ ಮತ್ತು ಮನುಕುಲದ ಉಳಿವಿಗಾಗಿ ಗೋಸಂತತಿ ಉಳಿವು ಅನಿವಾರ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.
ನಗರದ ಜೆ.ಪಿ.ನಗರದಲ್ಲಿ ನಡೆದ ಅಭಯಾಕ್ಷರ- ಹಾಲುಹಬ್ಬ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ರೈತರು ಹಾಗೂ ಗೋವು ಇಲ್ಲದಿದ್ದರೆ, ದೇಶಕ್ಕೆ ಅನ್ನ- ಹಾಲು ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಗೋಸಂರಕ್ಷಣೆಗೆ ಒತ್ತು ನೀಡಬೇಕು. ಗೋವಿನ ಉಳಿವಿಗಾಗಿ ಪ್ರತಿಯೊಬ್ಬರೂ ಗೋದೀಕ್ಷೆ, ಅಕ್ಷರದೀಕ್ಷೆ ಪಡೆದು ಕೈಜೋಡಿಸಬೇಕು ಎಂದು ಆಶಿಸಿದರು.
ಈ ವಿಶಿಷ್ಟ ಅಭಯಾಕ್ಷರ ಅಭಿಯಾನ ಜನಸಾಮಾನ್ಯರಿಗೆ ತನ್ನ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸಲು ಮತ್ತು ದೇಶವನ್ನು ಆಳುವವರಿಗೆ ಜನರ ಭಾವನೆಗಳನ್ನು ತಿಳಿಸಿ, ಭ್ರಮೆ ದೂರ ಮಾಡುವ ಬೃಹದಾಂದೋಲನ ಎಂದು ಬಣ್ಣಿಸಿದರು. ಖೋಡೆಸ್ ಪೋಷಿಸಿ ಇದೀಗ ಅನಾಥವಾಗಿರುವ ಗೋಶಾಲೆಯ ರಕ್ಷಣೆಗೆ ಶ್ರೀಮಠ ಬದ್ಧವಾಗಿದೆ ಎಂದು ಘೋಷಿಸಿದರು.
ಬದುಕು ಪ್ರವಾಹವಾದರೆ, ಕಾಲ ದೇಶಗಳು ಆ ಕಾಲದ ಎರಡು ದಂಡೆಗಳು. ಗೋಧೂಳಿ ಕಾಲಕ್ಕೆ ನಮ್ಮ ಸಂಸ್ಕøತಿಯಲ್ಲಿ ವಿಶೇಷ ಮಹತ್ವವಿದೆ. ಗೋವಿನ ಧೂಳು ಕೂಡಾ ಪರಮಪವಿತ್ರ ಎಂದು ಬಣ್ಣಿಸಿದರು. ಗೋ ಆಂದೋಲನಕ್ಕೆ ಗೆಲುವು ಸಿಕ್ಕಿದರೆ, ದೇಶಕ್ಕೆ ಬೆಳಕು ಸಿಗುತ್ತದೆ. ಇದಕ್ಕಾಗಿ ಎಲ್ಲರೂ ಶ್ರಮಿಸಬೇಕು. ಗೋರಕ್ಷಣೆ ಮನುಕುಲದ ಅಸ್ತಿತ್ವಕ್ಕೆ ಅನಿವಾರ್ಯ. ಸಮಾಜಕ್ಕೆ ಅದರ ಕಲ್ಪನೆ ಇಲ್ಲ. ಈ ಕಾರಣದಿಂದ ಅದನ್ನು ಕೊಂದು ತಿನ್ನುವ, ಪ್ಲಾಸ್ಟಿಕ್ ತಿನ್ನುವ ಪರಿಸರ ಸೃಷ್ಟಿಸುತ್ತಿದ್ದೇವೆ ಎಂದರು.
ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, “ಗೋವುಗಳು ಪ್ಲಾಸ್ಟಿಕ್ ಸೇವಿಸುವುದರಿಂದ ಗೋವಿನ ಜೀವಕ್ಕೆ ಅಪಾಯವಿದೆ. ಇದನ್ನು ತಪ್ಪಿಸುವ ಹೊಣೆ ನಮ್ಮದು. ಬೀಡಾಡಿ ಹಸುಗಳನ್ನು ರಕ್ಷಿಸಲು ಒತ್ತು ನೀಡೋಣ. ಗೋರಕ್ಷಣೆಗೆ ಹೆಚ್ಚಿನ ಗಮನ ಹರಿಸೋಣ. ಅದ್ದೂರಿ ಹುಟ್ಟುಹಬ್ಬಗಳನ್ನು ಆಚರಿಸುವ ಬದಲು, ಅದಕ್ಕೆ ಮಾಡುವ ವೆಚ್ಚವನ್ನು ಗೋಸಂರಕ್ಷಣೆಗೆ ನೀಡೋಣ” ಎಂದು ಸಲಹೆ ಮಾಡಿದರು.
“ಹಸುವನ್ನು ತಾಯಿಗೆ ಹೋಲಿಸಲಾಗುತ್ತದೆ. ಆದರೆ ಹಸುವಿನ ಸ್ಥಾನ ತಾಯಿಗಿಂತಲೂ ಶ್ರೇಷ್ಠ. ಗೋಹತ್ಯೆಗೆ ನಾವು ಮೌನವಾಗಿರುವುದು ತಾಯಿಗೆ ದ್ರೋಹ ಬಗೆದಂತೆ” ಎಂದು ಖ್ಯಾತ ಹಾಸ್ಯಸಾಹಿತಿ ವೈ.ವಿ.ಗುಂಡೂರಾವ್ ಅಭಿಪ್ರಾಯಪಟ್ಟರು. ಗೋಹತ್ಯೆ ನಮ್ಮ ಆಹಾರದ ಹಕ್ಕು ಎಂದು ಪ್ರತಿಪಾದಿಸುವವರು ಹುಲಿಗಿಂತ ಕ್ರೂರ ಎಂದರು. ಗೋಹತ್ಯೆಯನ್ನು ನೋಡಿ ನಾವು ಮೌನವಾಗಿರುವುದೂ ಆ ಕೃತ್ಯದಲ್ಲಿ ನಾವು ಕೈಜೋಡಿಸಿದಂತೆ ಎಂದು ಅಭಿಪ್ರಾಯಪಟ್ಟರು. ಗೋಸಂರಕ್ಷಣೆ ಆಂದೋಲನ ಕರ್ನಾಟಕದಿಂದ ಆರಂಭವಾಗಿ ವಿಶ್ವವ್ಯಾಪಿಯಾಗಿ ಬೆಳೆಯಲಿ ಎಂದು ಆಶಿಸಿದರು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕøತಿಯ ಅಂಶಗಳನ್ನು ಸೇರಿಸುವ ಮೂಲಕ ದೇಶದ ಉನ್ನತಿಗೆ ಕಾರಣರಾಗಬೇಕು ಎಂದು ಡಾ.ಸಮೀರ್ ಸಿಂಹ ಸಲಹೆ ಮಾಡಿದರು. ನೈಸರ್ಗಿಕ ವಸ್ತು, ಸಂಸ್ಕøತಿಯಷ್ಟೇ ಸಹಜತೆಯನ್ನು ಬೆಳೆಸಬಲ್ಲದು ಎಂದರು. ಪ್ರೊ.ಕೆ.ಎಸ್.ಭಟ್, ಅನೂಷ್ ಶೆಟ್ಟಿ, ಪಾಲಿಕೆ ಸದಸ್ಯ ಎಂ.ಅಂಜನಪ್ಪ, ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ವಿಶಿಷ್ಟ ಪರಿಕಲ್ಪನೆಯಾದ ಅಭಯಾಕ್ಷರ- ಹಾಲುಹಬ್ಬ, ವಾರಾಂತ್ಯದಲ್ಲಿ ರಾಜಧಾನಿಯ ಜನರಿಗೆ ವಿಶಿಷ್ಟ ಅನುಭವ ನೀಡಿತು. ಗೋಪೂಜೆ, ಗೋದೀಕ್ಷೆ, ಅಕ್ಷರದೀಕ್ಷೆ, ಗೋಗ್ರಾಸ, ಗೋವಿಚಾರ, ಪ್ರಸ್ತುತಿ, ಅಭಯಾಕ್ಷರ, ಗೋಕಲೆ, ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ರಥಯಾತ್ರೆಯನ್ನೊಳಗೊಂಡ ವಿಶಿಷ್ಟ ಕಾರ್ಯಕ್ರಮ ಜನಮನ ಸೂರೆಗೊಂಡಿರು.

Leave a Comment