ಅಭಯಾಕ್ಷರ ಆಂದೋಲನ ಗೋವನ್ನು ಕತ್ತರಿಸುವ ಕತ್ತಿಗೆ ಲೇಖನಿಯಿಂದ ಉತ್ತರ ನೀಡುವ, ರಕ್ತಕ್ಕೆ ಶಾಯಿಯಿಂದ ಉತ್ತರ ನೀಡುವ ಮಹದಭಿಯಾನ, ಇದಕ್ಕೆ ಅಭಯ ಚಾತುರ್ಮಾಸ್ಯ ಮೀಸಲು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಘೋಷಿಸಿದರು.

ಇದು ದೇಶದ ಚರಿತ್ರೆಯನ್ನೇ ಬದಲಿಸಬಲ್ಲ ಮಹತ್ಕಾರ್ಯಕ್ಕೆ ನಾಂದಿ. ಗೋತತ್ವಕ್ಕಾಗಿ ಗುರುತತ್ವ ಆಚರಿಸುವ ಮಹಾವ್ರತ ಇದಾಗಿದ್ದು, ಶ್ರೀಮಠದ ಶಿಷ್ಯಕೋಟಿ ಹಾಗೂ ಭಕ್ತರು ಬೆಂಗಳೂರಿನ ಪ್ರತಿ ಮನೆಯನ್ನು ತಲುಪಿ ಗೋವಿಗೆ ಅಭಯ ನೀಡುವ ಹಸ್ತಾಕ್ಷರ ಸಂಗ್ರಹಿಸುವರು. ಶ್ರೀಶಂಕರರು ೧೨೦೦ ವರ್ಷಗಳ ಹಿಂದೆ ದೇಶದ ಸಂಸ್ಕೃತಿಯನ್ನು ಉಳಿಸಿದರೆ, ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೋವಂಶ ಉಳಿಸಿದ ಕೀರ್ತಿ ಈ ಪೀಳಿಗೆಯದ್ದಾಗಲಿದೆ ಎಂದು ಬಣ್ಣಿಸಿದರು. ಅಭಯ ಚಾತುರ್ಮಾಸ್ಯದ ಮೊದಲ ದಿನದ ಧರ್ಮಸಭೆಯಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಳೆದ ಅರ್ಧ ಶತಮಾನದಲ್ಲಿ ಗೋವಿನ ಜೀವ ಉಳಿಸಲು ಜನ ರಾಜಕಾರಣಿಗಳ ಬಳಿ ಭಿಕ್ಷೆ ಬೇಡಿದ್ದಾರೆ. ಆದರೆ ಗೋಹತ್ಯೆ ತಡೆಯುವಲ್ಲಿ ರಾಜಕಾರಣಿಗಳು ವಿಫಲರಾಗಿದ್ದಾರೆ. ಆದ್ದರಿಂದ ಈಗ ಗೋವಿಗೆ ಅಭಯ ನೀಡುವ ಹಸ್ತಾಕ್ಷರ ಪಡೆಯುವ ಸಲುವಾಗಿ ಮನೆಮನೆಗೆ ಹೋಗಿ ಜನರ ಬಳಿ ಭಿಕ್ಷೆ ಬೇಡೋಣ. ಇದು ಸಾವಿರ ವರ್ಷಗಳಿಂದ ದೇಶಕ್ಕೆ ಯಾರೂ ನೀಡದ ಮಹತ್ವದ ಕೊಡುಗೆಯಾಗಬಲ್ಲದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ದೇಶದಲ್ಲಿ ಗೋಹತ್ಯೆ, ತಳಿಸಂಕರ, ನಿಂತು ಭಾರತೀಯ ಗೋವಂಶ ಶುದ್ಧರೂಪದಲ್ಲಿ ಉಳಿದುಕೊಂಡರೆ ಅದು ದೇಶಕ್ಕೆ ಅತಿದೊಡ್ಡ ಕೊಡುಗೆಯಾಗಲಿದೆ. ಶಂಕರಾಚಾರ್ಯರು ದೇಶಕ್ಕೆ ಸಂಸ್ಕೃತಿ ನೀಡಿದವರು. ಗೋವು ಉಳಿದುಕೊಂಡರೆ ಸಂಸ್ಕೃತಿ ಉಳಿದುಕೊಂಡಂತೆ ಎಂದು ವಿಶ್ಲೇಷಿಸಿದರು.

ಕಳೆದ ವರ್ಷ ಗೋ ಮಹತಿ ಸಾರಿದ ಗೋ ಚಾತುರ್ಮಾಸ್ಯದ ಮುಂದುವರಿದ ಭಾಗವೇ ಗೋಮಾತೆಗೆ ಅಭಯ ನೀಡುವ ಅಭಯ ಚಾತುರ್ಮಾಸ್ಯ. ದೇಶದ ಸಂವಿಧಾನದ ಮಹತ್ತರ ಆಶಯ ಪ್ರತಿಪಾದಿಸುವ, ಪ್ರಜಾಪ್ರಭುತ್ವ ಸರ್ಕಾರಗಳಿಗೆ ಹಕ್ಕೊತ್ತಾಯ ಮಂಡಿಸುವ ಆಂದೋಲನ ಇದು. ರಾಜ್ಯದಲ್ಲಿ ಗೋಮಾತೆಯ ಪರವಾದ ಬಹುಮತ ಇದೆ. ಅದನ್ನು ಅಕ್ಷರರೂಪಕ್ಕೆ ಇಳಿಸಿ, ಅರ್ಜಿಯ ರೂಪದಲ್ಲಿ ದೇಶಕ್ಕೆ ಪ್ರದರ್ಶಿಸುವ ಮೂಲಕ ಬಹುಮತ ಪ್ರಕಟವಾಗಲಿದೆ ಎಂದರು.

ರಾಜ್ಯದ ಆರೂವರೆ ಕೋಟಿ ಜನರ ಪೈಕಿ ಒಂದು ಕೋಟಿ ಹದಿನಾಲ್ಕು ಲಕ್ಷ ಜನ ಒಂದು ಸರ್ಕಾರದ ಪರವಾಗಿ ಮತ ಚಲಾಯಿಸಿದ್ದು, ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಬಹುಮತ. ಆದರೆ ಅದಕ್ಕಿಂತ ನಾಲ್ಕು ಪಟ್ಟು ದೊಡ್ಡ ಬಹುಮತ ಗೋಮಾತೆಯ ಪರವಾಗಿ ಇದೆ. ಇದನ್ನು ಅಭಯಾಕ್ಷರದ ಮೂಲಕ ಪ್ರಕಟಿಸುವುದು ಈ ಆಂದೋಲನದ ಉದ್ದೇಶ ಎಂದು ವಿವರಿಸಿದರು.

ಪ್ರಜಾಪ್ರಭುತ್ವ ಸರ್ಕಾರ, ಜನಮತಕ್ಕೆ ಬೆಲೆ ಕೊಡುತ್ತದೆ ಎಂದಾದರೆ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಗೋಸಂರಕ್ಷಣೆಗೆ ಬದ್ಧರಾಗುವುದು ಅನಿವಾರ್ಯವಾಗಲಿದೆ. ಇದು ರಾಜಕೀಯ ಮೀರಿದ ಚುನಾವಣೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ಇದು ಪರ್ಯಾಯ ರಾಜಕೀಯವಲ್ಲ. ರಾಜಕೀಯಕ್ಕೇ ಪರ್ಯಾಯವಾದ ಆಂದೋಲನ ಎಂದು ವಿಶ್ಲೇಷಿಸಿದರು.

ಬೆಂಗಳೂರಿನ ಪ್ರತಿ ವ್ಯಕ್ತಿಯನ್ನು ತಲುಪುವ ಆಂದೋಲನ ಚಾತುರ್ಮಾಸ್ಯದ ಅವಧಿಯಲ್ಲಿ ನಡೆಯಲಿದೆ. ಮುಂದೆ ರಾಜ್ಯ, ದೇಶಕ್ಕೆ ಇದನ್ನು ವಿಸ್ತರಿಸಲಾಗುತ್ತದೆ. ಇಷ್ಟು ಸಹಿ ಪ್ರದರ್ಶಿಸುವ ಮೂಲಕ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲಾಗುತ್ತದೆ. ಗೋವಿನ ಪ್ರಾಣ ರಾಜಕಾರಣಿಗಳ ಕೈಯಲ್ಲಿದ್ದರೆ, ರಾಜಕಾರಣಿಗಳ ಜೀವ ಮತದಾರರ ಕೈಯಲ್ಲಿದೆ. ಇದರಿಂದ ಗೋಭಕ್ತರೆಲ್ಲರೂ ಒಗ್ಗಟ್ಟಾದರೆ ಗೋಸೇವೆ ಮಾಡುವುದು ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಗುತ್ತದೆ. ಈ ಮೂಲಕ ರಾಮರಾಜ್ಯ ನಿರ್ಮಿಸೋಣ ಎಂದರು.

ಅಭಯ ಚಾತುರ್ಮಾಸ್ಯದ ಬಳಿಕ ಅಭಯಾಕ್ಷರ ಸಂಗ್ರಹಕ್ಕಾಗಿ ಅಭಯ ಗೋಯಾತ್ರೆ ರಾಜ್ಯಾದ್ಯಂತ ನಡೆಯಲಿದೆ. ರಾಜ್ಯದಲ್ಲಿ ಗೋವಿನ ಪರವಾದ ಹಸ್ತಾಕ್ಷರಗಳು ಮೆರವಣಿಗೆಯಾಗಲಿವೆ. ದೇಶದ ಪ್ರತಿಯೊಬ್ಬರೂ ಭಾರತೀಯ ಪರಂಪರೆಗೇ ಸೇರಿದವರು. ಆದ್ದರಿಂದ ಎಲ್ಲರೂ ಈ ಮಹದಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಗುರುಪೂರ್ಣಿಮೆ, ಗೋಪೂರ್ಣಿಮೆಯಾಗಬೇಕು ಎಂದು ಆಶಿಸಿದರು.

ಮಠ ಎಂದರೆ ಸರ್ಕಾರಕ್ಕೆ, ರಾಜಕಾರಣಕ್ಕೆ ಪರ್ಯಾಯ. ನಮ್ಮ ದೇಶ, ಸಂಸ್ಕೃತಿಗೆ ಬೇಕಾದ್ದನ್ನು ಮಾಡುವುದು ನಮ್ಮ ಧ್ಯೇಯ. ನಿಮ್ಮ ಧ್ವನಿಗೆ ಇಲ್ಲಿ ಬೆಲೆ ಇದೆ. ಆದ್ದರಿಂದ ರಾಜಕಾರಣಿಗಳಲ್ಲಿ ಭಿಕ್ಷೆ ಬೇಡುವ ಬದಲು, ಶ್ರೀಮಠಕ್ಕೆ ಬನ್ನಿ. ರಕ್ಷಿಸುವ ಹೊಣೆ ನಮ್ಮದು. ಮಹದೇಶ್ವರ ಬೆಟ್ಟದಲ್ಲಿ ವಿನಾಶದ ಅಂಚಿನಲ್ಲಿದ್ದ ಗೋವುಗಳಿಗೆ ೩೫೦೦ ಕೋಟಿ ಮೇವು ವಿತರಿಸಿದ್ದು, ಶ್ರೀಮಠದ ಹೆಗ್ಗಳಿಕೆಯಲ್ಲ. ಸಮಾಜದ ಹೆಗ್ಗಳಿಕೆ ಎಂದು ಬಣ್ಣಿಸಿದರು.

ಇದಕ್ಕೂ ಮುನ್ನ ವೇದಿಕೆಯಲ್ಲಿದ್ದ ಗೋ ಕಲಾಕೃತಿಗೆ ಸ್ವಾಮೀಜಿಯವರು ಹಸ್ತಾಕ್ಷರ ನೀಡುವ ಮೂಲಕ ಚಾತುರ್ಮಾಸ್ಯ ಧರ್ಮಸಭೆಗೆ ಚಾಲನೆ ನೀಡಿದರು. ಶ್ರೀಶಂಕರ ಪೀಠವೊಂದು ಗೋವಿಗಾಗಿ ಚಾತುರ್ಮಾಸ್ಯ ಸಮರ್ಪಿಸುತ್ತಿರುವುದು ಇದೇ ಮೊದಲು. ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಮುಂಬೈನ ಉದ್ಯಮಿ ಪವನ್ ಶೇಟ್, ಪಶುವೈದ್ಯ ಡಾ.ಬಸವರಾಜ ಬಿರಾದಾರ್, ಹವ್ಯಕ ಸಭಾ ಅಧ್ಯಕ್ಷ ಡಾ.ಗಿರಿಧರ್ ಕಜೆ, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಎನ್ಡಿಆರ್‌ಐ ನಿರ್ದೇಶಕ, ಗೋವಿಜ್ಞಾನಿ ಡಾ.ಕೆ.ಪಿ.ರಮೇಶ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ, ಜೆಡಿಎಸ್ ಮುಖಂಡ ಲಕ್ಷ್ಮೀನಾರಾಯಣ ಮತ್ತಿತರ ಗಣ್ಯರು ಗೋಸಂರಕ್ಷಣೆ ಕುರಿತ ಹಸ್ತಾಕ್ಷರವನ್ನು ಸ್ವಾಮೀಜಿಯವರಿಗೆ ಸಮರ್ಪಿಸಿದರು. ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್ ಅವರೂ ಗೋಕಲಾಕೃತಿಗೆ ಹಸ್ತಾಕ್ಷರ ನೀಡಿದರು.

ಶ್ರೀಮಠದ ಕಾಮದುಘಾ ವಿಭಾಗದ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿಯವರು, ಚಾತುರ್ಮಾಸ್ಯದ ಪ್ರಮುಖ ಕಾರ್ಯಕ್ರಮಗಳಾದ ಅಭಯಾಕ್ಷರ ಅಭಿಯಾನ ಹಾಗೂ ಹಾಲುಹಬ್ಬದ ಬಗ್ಗೆ ವಿವರ ನೀಡಿ, “ರಾಷ್ಟ್ರಮಟ್ಟದಲ್ಲಿ ಗೋಹತ್ಯೆ ನಿಷೇಧ ಆಗಲೇಬೇಕು ಎಂಬ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಚಾತುರ್ಮಾಸ್ಯ ಅವಧಿಯಲ್ಲೇ ಬೆಂಗಳೂರಿನ ಒಂದು ಕೋಟಿ ಮಂದಿಯ ಸಹಿ ಸಂಗ್ರಹಿಸುವ ವಿಶಿಷ್ಟ ಅಭಿಯಾನ ಇದಾಗಿದೆ. ರಾಜ್ಯದಲ್ಲಿ ಐದು ಕೋಟಿಗೂ ಅಧಿಕ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ” ಎಂದರು, ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಹಾಲುಹಬ್ಬ ನಡೆಯಲಿದೆ ಎಂದು ವಿವರಿಸಿದರು.

ಇದಕ್ಕೂ ಮೊದಲು ಬೆಳಗ್ಗೆ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ತಮ್ಮ ೨೪ನೇ ಚಾತುರ್ಮಾಸ್ಯವ್ರತವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆಯನ್ನು ಕೈಗೊಳ್ಳುವಮೂಲಕ ವಿಧ್ಯುಕ್ತವಾಗಿ ಆರಂಭಿಸಿದರು. ಶ್ರೀರಾಮಾದಿ ದೇವರ ಪೂಜೆಯನ್ನು ಮಾಡಿ, ನಿಂಬೆಯಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು ಹಾಗೂ ವ್ಯಾಸಾದಿ ಋಷಿಗಳನ್ನು ಆವಾಹನೆಮಾಡಿ,ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು.

ರಾಜ್ಯ ದಲಿತ ಸಂಘರ್ಷ ಸಮಿತಿ(ರಿ) ಅಂಬೇಡ್ಕರ್ ಧ್ವನಿಯ ರಾಜ್ಯಾಧ್ಯಕ್ಷರಾದ ಚಂದ್ರಕಾಂತ ಎಸ್ ಕಾದ್ರೋಳ್ಳಿ ಇವರು ’ಅಭಯಚಾತುರ್ಮಾಸ್ಯ’ಕ್ಕೆ ಆಗಮಿಸಿ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು. ಬೆಂಗಳೂರಿನಲ್ಲಿ ನಡೆಯುತ್ತಿರುವ “ಅಭಯಾಕ್ಷರ” ಅಭಿಯಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿ ಈ ಸಂಧರ್ಭದಲ್ಲಿ ಹೇಳಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಕೆಕ್ಕಾರು ಸಭಾಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗುರುಸಂಗೀತ ಆಪ್ ಬಿಡುಗಡೆ ಮಾಡಲಾಯಿತು. ವಿದ್ವಾನ್ ಜಗದೀಶ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

ಗುರು – ಶಿಷ್ಯರ ಅನ್ಯೋನ್ಯ ಸಂಬಧದ ಪ್ರತೀಕವಾದ ಚಾತುರ್ಮಾಸ್ಯ ವ್ರತಸಂಕಲ್ಪ:

ವ್ಯಾಸಪೂಜೆಯ ನಂತರ, ಮಠೀಯ ಪದ್ಧತಿಯಂತೆ ’ಗರುಡಾಸನ’ದಲ್ಲಿ ಕುಳಿತ ಪೂಜ್ಯ ಶ್ರೀಗಳು ” ವರ್ಷಾಕಾಲದ ಎರಡು ತಿಂಗಳಕಾಲದ ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿದ್ದು, ಸಕಲ ಜೀವಿಗಳಿಗೂ ಯಾವುದೇ ತೊಂದರೆ ಇಲ್ಲದಿದ್ದರೆ, ನಾವು ಇಲ್ಲಿಯೇ ವ್ರತದೀಕ್ಷೆಯನ್ನು ಕೈಗೊಳ್ಳುತ್ತೇವೆ” ಎಂದು ಹೇಳಿದರು. ಇದಕ್ಕೆ ಪ್ರತಿಸ್ಪಂದನೆಯಾಗಿ ” ಸಮಸ್ತ ಶಿಷ್ಯಸ್ತೋಮದ ಒಳಿತನ್ನು ಬಯಸಿ, ಪೂಜ್ಯ ಶ್ರೀಗಳು ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಆಗಿದೆ. ನಿತ್ಯಾನುಷ್ಠಾನಗಳಿಗೆ ಯಥಾವಿಹಿತವಾದ ಸೌಕರ್ಯವನ್ನು ನಮ್ಮಿಂದ ಪೂಜ್ಯರು ಪಡೆದುಕೊಂಡು, ನಮ್ಮೆಲ್ಲರನ್ನೂ ಹರಸಬೇಕು” ಎಂದು ಶಿಷ್ಯವೃಂದ ಶ್ರೀಗಳಲ್ಲಿ ಭಿನ್ನವಿಸಿಕೊಂಡ ಮನೋಜ್ಞ ಸನ್ನಿವೇಶ ಗುರು – ಶಿಷ್ಯರ ಅನ್ಯೋನ್ಯ ಸಂಬಂಧದ ದ್ಯೋತಕವಾಯಿತು.

Leave a Comment