ಕಟುಕರಿಂದ ರಕ್ಷಿಸಿ ಕಾಯುವ ಕೈಗೆ ಗೋವುಗಳನ್ನು ಒಪ್ಪಿಸೋಣ : ರಾಘವೇಶ್ವರ ಶ್ರೀ

* 1,15,000 ಅಭಯಾಕ್ಷರ ಅರ್ಜಿಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.
* ಶಾಸಕ ಮುನಿರಾಜು, ಯೋಗಗುರುಗಳಾದ ಉಮಾಮಹೇಶ್ವರ್ ಉಪಸ್ಥಿತಿ.

ನಮ್ಮೆಲ್ಲರ ಬದುಕಿನ ಹಿಂದೆ ಮೌನದಲ್ಲಿ ಮಾತಾಡುವ ಗೋಮಾತೆ ಇದ್ದಾಳೆ. ಸಕಲ ಶುಭಗಳ ಸಾಗರ ಗೋಮಾತೆಯಾಗಿದ್ದಾಳೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಟಿ.ದಾಸರಹಳ್ಳಿಯ ವಾಸ್ಕ್ ಯೋಗಕೇಂದ್ರದಲ್ಲಿ ನೆಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮವನ್ನುದ್ದೇಶಿಸಿ ಗೋಸಂದೇಶ ನೀಡಿದ ರಾಘವೇಶ್ವರ ಶ್ರೀಗಳು, ಗೋವಿನ ಪರ ಹಲವರು, ಗೋವಿನ ವಿರುದ್ಧ ಇರುವವರು ಕೆಲವರು ಮಾತ್ರ. ಆದರೆ ಸರ್ಕಾರ ಈ ಕೆಲವರ ಪರವಾಗಿ ನಿಂತಿದೆ. ಕಾರಣ, ಗೋವಿನ ವಿರುದ್ಧ ಇರುವ ಕೆಲವರು ಸಂಘಟಿತರಾಗಿದ್ದಾರೆ. ಗೋವಿನ ಸುತ್ತ ವಿಷವ್ಯೂಹವನ್ನು ರಚಿಸಿದ್ದಾರೆ. ಆದರೆ ನಾವು ಹಲವರಿದ್ದೂ ಸಂಘಟಿತರಾಗಿಲ್ಲ. ಈ ಸಂಘಟನೆಗಾಗಿ ಹಾಲುಹಬ್ಬ. ದೇಹದಲ್ಲಿ ರೋಗಾಣುಗಳಿದ್ದರೆ ಅದರ ವಿರುದ್ಧ ಹೋರಾಡಲಿಕ್ಕಾಗಿ ಪ್ರತಿರೋಧಕ ಜೀವಾಣುಗಳು ಬೇಕಾಗುತ್ತದೆ. ಹಾಗಾಗಿ ಗೋಹತ್ಯೆ ಮಾಡುವ ರೋಗಾಣುಗಳಿಂತಿರುವ ಹಂತಕರಿಗೆ ನಾವು ಗೋಭಕ್ತರಾಗಿ ಪ್ರತಿರೋಧಕ ಜೀವಾಣುಗಳಂತೆ ಉತ್ತರ ನೀಡಬೇಕಿದೆ. ಗೋವು ಕೇವಲ ಪ್ರಾಣಿಯಲ್ಲ. ದೇಶದ ಪ್ರಾಣವೇ ಆಗಿದ್ದು, ಈ ಗೋಸಂರಲ್ಷಣೆಗಾಗಿ ನಾವೆಲ್ಲಾ ಮಾತಾಡಲೇಬೇಕಿದೆ.

ಗೋಪ್ರೇಮತರಂಗಗಳು ದೇಶದಾದ್ಯಂತ ಸಂಚರಿಸುವಂತಾಗಲು ನಾವೆಲ್ಲರೂ ಗೋಪರ ಧ್ವನಿಯನ್ನೆತ್ತೋಣ. ಗೋಪ್ರೇಮಸಮರದ ಪೀಠಿಕೆಗೆ ಮುಂದಡಿ ಇಡುವ ಸಲುವಾಗಿ ಅಕ್ಷರದೀಕ್ಷೆಯನ್ನು ಪಡೆಯೋಣ. ಕಟುಕರಿಂದ ರಕ್ಷಿಸಿ ಕಾಯುವ ಕೈಗೆ ಗೋವುಗಳನ್ನು ಒಪ್ಪಿಸುವ ಗೋಸಂಜೀವಿನಿಗೆ ನಮ್ಮ ಸಹಕಾರ ನೀಡೋಣ ಎಂದರು.

ವಿಧಾನಸಭಾ ಸದಸ್ಯರಾದ ಶ್ರೀ ಮುನಿರಾಜುರವರು ಮಾತನಾಡಿ, ಗೋಮಾತೆಯ ಗೊಬ್ಬರದಿಂದ ಬೆಳೆದ ತರಕಾರಿಗಳಿಂದ ಪೌಷ್ಟಿಕ ಆಹಾರ ದೊರೆಯುತ್ತಿತ್ತು. ಹಾಲು, ಮೊಸರು, ಬೆಣ್ಣೆ, ತುಪ್ಪ ಆರೋಗ್ಯಕರವಾಗಿದ್ದವು. ಆಧುನೀಕತೆ ಮುಂದುವರೆದಂತೆ ನಾವೆಲ್ಲಾ ಇದರಿಂದ ದೂರಾಗಿದ್ದೇವೆ. ಗೋಹತ್ಯೆ ನಿಷೇಧವಾಗಬೇಕು ಎಂದು ಇಡೀ ದೇಶದ ಜನರ ಕೂಗಿದೆ. ಆದರೆ ನಾವು ನಮ್ಮ ಪ್ರಯತ್ನದಲ್ಲಿ ವಿಫಲರಾಗುತ್ತಿದ್ದೇವೆ. ಇದಕ್ಕಾಗಿ ಶ್ರೀರಾಮಚಂದ್ರಾಪುರಮಠ ಮಾಡುತ್ತಿರುವ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕಾದ ಅವಶ್ಯಕತೆ ಇದೆ. ನಮ್ಮ ಸಂಸ್ಕಾರ, ನಮ್ಮ ಸಂಸ್ಕೃತಿಗಳನ್ನು ರಕ್ಷಿಸಿಕೊಳ್ಳಲು ನಾವೇ ತೊಡಗಿಕೊಳ್ಳಬೇಕಾಗಿದೆ ಎಂದರು.

ಯೋಗಗುರುಗಳಾದ ಶ್ರೀ ಉಮಾಮಹೇಶ್ವರರವರು ಮಾತನಾಡಿ, ದನದ ಮಾಂಸ ತಿನ್ನುವವರು ಮಾಡುತ್ತಿರುವ ಹಬ್ಬಗಳಿಗೆ ಪ್ರತಿಯಾಗಿ ನಮ್ಮ ಸಮಾಜದ ಸ್ವಾಸ್ಥ್ಯಕ್ಕಾಗಿ ಹುಟ್ಟಿರುವ ಹಬ್ಬವೇ ಹಾಲುಹಬ್ಬ. ಹಳ್ಳಿಕಾರ್, ಗಿರ್, ಮಲೆನಾಡು ಗಿಡ್ಡದಂತಹ ತಳಿಗಳು ರೋಗನಿವಾರಕ ಶಕ್ತಿಯನ್ನು ಹೊಂದಿದೆ. ಇಂತಹ ಗೋವಿನ ಮಹತ್ತ್ವವನ್ನು ಅರಿತು ಸಂರಕ್ಷಣೆಗೆ ನಾವೆಲ್ಲಾ ಮುಂದಾಗಬೇಕಿದೆ ಎಂದರು.

ಶ್ರೀ ನರಸಿಂಹ ನಾಯಕ್ ರವರು ಮಾತನಾಡಿ, ನಮ್ಮ ಭಾರತೀಯ ಪರಂಪರೆಯಲ್ಲಿ ದೈವತ್ವವನ್ನು ಆರೋಪಿಸಿಕೊಳ್ಳುವ ಏಕೈಕ ಪ್ರಾಣಿ ಗೋಮಾತೆ. ಅಂತಹಾ ಗೋವು ಇಂದು ಅವಸಾನದ ಅಂಚಿನಲ್ಲಿದೆ. ಈ ಸಂದರ್ಭದಲ್ಲಿ ಗೋವಿನ ಪರವಾಗಿ ನಿಂತ ಶ್ರೀರಾಮಚಂದ್ರಾಪುರಮಠ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ. ಈ ಜವಾಬ್ದಾರಿ ಎಲ್ಲ ಜನಸಮುದಾಯದ್ದೂ ಆಗಿದೆ. ಹಾಗಾಗಿ ಎಲ್ಲರೂ ಸೇರಿ ದೈವಸಮಾನವಾದ ಗೋವನ್ನು ಪೋಷಿಸಿ ಕೃತಾರ್ಥರಾಗೋಣ ಎಂದರು.

ಶ್ರೀ ಶರತ್ ಶರ್ಮಾರವರು ಮಾತನಾಡಿ, ನಾವು ನಮ್ಮ ಜೀವನದಿಂದ ಗೋವನ್ನು ದೂರತಳ್ಳಿದ್ದೇವೆ. ನಾನೆನ್ನುವ ಗರ್ವ ಇಂದು ನಮ್ಮನ್ನು ಆಳುತ್ತಿದೆ. ಆರ್ಥಿಕತೆಯೆನ್ನುವುದು ಹಣದಿಂದ ಮಾತ್ರ ಅಳೆಯಲ್ಪಡುತ್ತಿದೆ. ಪ್ರಕೃತಿ ಪ್ರೀತಿಯೇ ನಿಜ ಶ್ರೀಮಂತಿಕೆ. ಗವ್ಯ ಉತ್ಪನ್ನಗಳ ಬಳಕೆಯ ಮೂಲಕ ಗೋವು, ಗಂಗೆ, ಭೂಮಿ, ಗೀತೆ ಎಲ್ಲವನ್ನೂ ರಕ್ಷಿಸಿಕೊಳ್ಳೋಣ ಎಂದರು.

ಗೋರಕ್ಷಕದಳದ ಶ್ರೀ‌ಚೆನ್ನಕೇಶವ್ ರವರು ಮಾತನಾಡಿ, ದೇಸಿ ಗೋವುಗಳು ನೆಡೆದಾಡುವ ದೇವರು. ಗೋವನ್ನು ಕಡಿಯುವುದು ಹೆತ್ತ ತಾಯಿಯನ್ನು ಕೊಂದಂತೆ. ವಾತಾವರಣ ಶುದ್ಧಗೊಳಿಸುವ ಶಕ್ತಿ ಗೋವಿನ ಸಗಣಿ ಹಾಗೂ ತುಪ್ಪದಿಂದ ನೆಡೆಯುವ ಅಗ್ನಿಹೋತ್ರ ಹೋಮಕ್ಕಿದೆ. ಸುವರ್ಣಕ್ಷಾರ ಗ್ರಂಥಿ ಹಾಗೂ ಗೋರೋಚನ ಗೋವಿನ ಪ್ರಮುಖ ಅಂಶಗಳು. ಇಂತಹಾ ಗೋವನ್ನು ಮಾನಿಸಬೇಕಿದೆ ಎಂದರು.

ಪ್ರತೀ ಹಾಲುಹಬ್ಬದಂತೆ ಈ ಹಾಲುಹಬ್ಬದಲ್ಲಿ ಕೂಡಾ ಪಂಚಗವ್ಯ ಆಧಾರಿತ ಲೆಮನ್ ಸೋಪನ್ನು ಮಾ ಗೋ ಪ್ರಾಡಕ್ಟ್ಸ್ ವತಿಯಿಂದ ಬಿಡುಗಡೆಗೊಳಿಸಲಾಯಿತು.

ಟಿ ದಾಸರಹಳ್ಳಿ ಸುತ್ತಮುತ್ತ ಗೋಕಿಂಕರರು ಸಂಗ್ರಹಿಸಿದ 1,15,000 ಅಭಯಾಕ್ಷರ ಅರ್ಜಿಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.

Leave a Comment