ರಾಷ್ಟ್ರದ ನೆಲಕ್ಕೆ ಒಂದು ಬಿಂದು ಕೂಡಾ ಗೋವಿನ ರಕ್ತ ಬೀಳದಂಥ ದಿನ ಬರಲಿ : ರಾಘವೇಶ್ವರಶ್ರೀ
* ರಾಷ್ಟ್ರಸಂತ ಲಲಿತಪ್ರಭ ಸಾಗರ್, ಶ್ರೀ ವಿದ್ಯಾಭಿನವ ಶಂಕರಭಾರತೀಸ್ವಾಮೀಜಿ ಉಪಸ್ಥಿತಿ
ಬೆಂಗಳೂರು: ದೇಶದ ಸ್ವಾತಂತ್ರ್ಯದ ಕಿಡಿ ಆರಂಭವಾದದ್ದೇ ಗೋವಿನ ಕಾರಣದಿಂದ. ಆದರೆ ಅಂಥ ಪವಿತ್ರ ಭಾರತದಲ್ಲಿ ಇಂದು ಗೋವಧೆಜನ್ಯ ವಸ್ತುಗಳ ಬಳಕೆ ಅವ್ಯಾಹತವಾಗಿ ನಡೆದಿದೆ. ಇದು ನಿಂತರಷ್ಟೇ ದೇಶಕ್ಕೆ ಭವಿಷ್ಯ. ಆದ್ದರಿಂದ ಗೋವಧೆಜನ್ಯ ವಸ್ತುಗಳನ್ನು ತಿರಸ್ಕರಿಸೋಣ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಕರೆ ನೀಡಿದರು.
ಕೆಂಪೇಗೌಡನಗರದ ಉದಯಭಾನು ಆಟದ ಮೈದಾನದಲ್ಲಿ ಭಾನುವಾರ ನಡೆದ 10ನೇ ಅಭಯಾಕ್ಷರ- ಹಾಲುಹಬ್ಬ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಇಡೀ ಸಮಾಜ ಗೋಮಾತೆಯ ರಕ್ಷಣೆಗೆ ಕಂಕಣಬದ್ಧರಾಗಬೇಕಿದೆ. ಗೋಮಾತೆಗಾಗಿ ಗೋದೀಕ್ಷೆ, ಅಕ್ಷರದೀಕ್ಷೆ ಸ್ವೀಕರಿಸಿ ಒಗ್ಗಟ್ಟಾಗಿ ಸಂಗ್ರಾಮಕ್ಕೆ ಸಜ್ಜಾಗೋಣ ಎಂದು ಕೋರಿದರು.
ಕೆಂಪುಕೋಟೆಯಲ್ಲಿ ಕಾಮಧೇನು ಧ್ವಜ ಹಾರಿಸುವ, ರಾಷ್ಟ್ರದ ನೆಲಕ್ಕೆ ಒಂದು ಬಿಂದು ಕೂಡಾ ಗೋವಿನ ರಕ್ತ ಬೀಳದಂಥ ದಿನ ಬರಲಿ ಎಂದು ಆಶಿಸಿದರು. ದೇಶದಲ್ಲಿ ಹಾಲಿನ ಹೆಸರಿನಲ್ಲಿ ಹಾಲಾಹಲ ಸೇವಿಸುತ್ತಿದ್ದೇವೆ. ಹಾಲನ್ನು ಮರೆತ ಸಮಾಜಕ್ಕೆ ಹಾಲಿನ ರುಚಿ ತೋರಿಸುವುದೇ ಹಾಲು ಹಬ್ಬದ ಉದ್ದೇಶ ಎಂದು ನುಡಿದರು.ದೇಶ
ಗೋವಾ ಮೂಲದ ಶ್ವೇತಕಪಿಲಾ ಎಂಬ ಅಪರೂಪದ ಗೋತಳಿ ವಿನಾಶದ ಅಂಚಿನಲ್ಲಿದೆ. ಇಂಥ ವಿನಾಶದೊಂದಿಗೆ ರಾಜ್ಯದ ವಿನಾಶವೂ ಆರಂಭವಾಗಲಿದೆ ಎಂದು ಎಚ್ಚರಿಸಿದರು. ದೇಶದಲ್ಲಿ ಹತ್ತು ಕೋಟಿ ಕೃತ್ರಿಮ ಗೋವನ್ನು ಉತ್ಪಾದಿಸಿ, ಗೋಸಂತತಿಯನ್ನೇ ಕುಲಗೆಡಿಸುವ ಹುನ್ನಾರ ನಡೆದಿದೆ ಎಂದು ವಿಶ್ಲೇಷಿಸಿದರು.
ರಾಷ್ಟ್ರಸಂತ ಲಲಿತಪ್ರಭ ಸಾಗರ್ ಆಶೀರ್ವಚನ ನೀಡಿ, “ಇಡೀ ರಾಷ್ಟ್ರದಲ್ಲಿ  ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರು ಮಾಡುತ್ತಿರುವ ಸೇವೆ ಅನನ್ಯ. ಅವರ ಈ ದಿವ್ಯ ಕೈಂಕರ್ಯದಲ್ಲಿ ಇಡೀ ಜೈನ ಸಮುದಾಯ ಬೆಂಬಲಕ್ಕೆ ನಿಲ್ಲಲಿದೆ” ಎಂದು ಘೋಷಿಸಿದರು.
ಗಂಗೆ, ಗೋವಿಂದ, ಗೀತೆ, ಗುರುವಿಗೆ ನಮ್ಮ ಸಂಸ್ಕøತಿಯಲ್ಲಿ ಉಚ್ಛ ಸ್ಥಾನವಿದೆ. ಆದರೆ ಎಲ್ಲ ದೇವರನ್ನು ಗೋಮಾತೆ ತನ್ನಲ್ಲಿ ಹೊಂದಿದೆ. ಈ ಎಲ್ಲರಿಗಿಂತಲೂ ಸರ್ವಶ್ರೇಷ್ಠ ಸ್ಥಾನ ಗೋಮಾತೆಯದ್ದು. ಜೈನಸಂಪ್ರದಾಯದಲ್ಲಿ ಗೋಸಂಪತ್ತೇ ಸರ್ವಶ್ರೇಷ್ಠ. ಮನೆಮನೆಯನ್ನೂ ಗೋಸೇವೆ ಮಾಡಿದರೆ ದೇಶದಲ್ಲಿ ಒಂದು ಗೋಶಾಲೆಯ ಅಗತ್ಯವೂ ಇರುವುದಿಲ್ಲ; ಪಂಚಗವ್ಯ ಚಿಕಿತ್ಸೆ ಎಲ್ಲ ರೋಗವನ್ನು ಗುಣಪಡಿಸಬಲ್ಲದು ಎಂದು ಬಣ್ಣಿಸಿದರು. ಗೋಹತ್ಯೆ ನಿಷೇಧವಾದ ದಿನ ಭಾರತ ವಿಶ್ವಮನ್ನಣೆ ಗಳಿಸಲಿದೆ. ಈ ನಿಟ್ಟಿನಲ್ಲಿ ಜಾತಿ, ಮತ ಬೇಧ ಮರೆತು ಜನ ಕಾರ್ಯೋನ್ಮುಖವಾಗಬೇಕು ಸೂಚಿಸಿದರು.
ಯಾವ ಭಾಷೆ, ಪ್ರದೇಶ ಅಥವಾ ಧರ್ಮದ ಜನರಾಗಲೀ ಗೋಮಾಂಸ ಭಕ್ಷಿಸುವುದು ದೇಶಕ್ಕೆ ಮಾಡುವ ಅವಮಾನ. ಜೀವನದಲ್ಲಿ ಸರಾಸರಿ 10 ಸಾವಿರ ಕೆ.ಜಿ. ಮಾಂಸ ಭಕ್ಷಣೆ ಮಾಡುವವರು ಹತ್ತು ಗ್ರಾಂ ಮಾಂಸ ತೆಗೆದರೆ ಎಷ್ಟು ನೋವಾಗುತ್ತದೆ ಎಂದು ಮನವರಿಕೆ ಮಾಡಿಕೊಳ್ಳಲಿ ಎಂದು ಹೇಳಿದರು.
ಗೋವು ಅಡ್ಡಾಡುವಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ. ಗೋಮೂತ್ರ, ಗೋಮಯದಲ್ಲಿ ಅಪಾರ ಶಕ್ತಿ ಇದೆ. ಗೋಮೂತ್ರ ನಾಡಿಯನ್ನು ಶುದ್ಧಗೊಳಿಸಿದರೆ, ಗೋಮಯ ಅಣುವಿಕಿರಣವನ್ನು ತಡೆಯುವ ಸಾಮಥ್ರ್ಯವನ್ನೂ ಹೊಂದಿದೆ ಎಂದು ಶ್ರೀ ಅವಿಚ್ಛಿನಪರಂಪರಾ ಕೂಡ್ಲಿಶೃಂಗೇರಿಮಠದ ಶ್ರೀ ವಿದ್ಯಾಭಿನವ ಶಂಕರಭಾರತೀಸ್ವಾಮೀಜಿ ವಿವರಿಸಿದರು.
ಕಿರುತೆರೆ ನಟ ವಿಜಯಸೂರ್ಯ, ಆರೆಸ್ಸೆಸ್ ದಕ್ಷಿಣ ಪ್ರಾಂತ ಕಾರ್ಯವಾಹ ಎನ್.ತಿಪ್ಪೇಸ್ವಾಮಿ, ಕೋಟೇಶ್ವರ ಸೂರ್ಯನಾರಾಯಣ ರಾವ್, ಬಿಜೆಪಿ ಮುಖಂಡ ಪಿ.ಎನ್.ಸದಾಶಿವ, ಛಾಯಾಪತಿ ಗೋಸಂದೇಶ ನೀಡಿದರು. ಹೂವಿನಹಡಗಲಿಯ ದಿವಾಕರ ಗೌಡ ದಂಪತಿಗಳು ಗೋಶಾಲೆಗಾಗಿ ಶ್ರೀರಾಮಚಂದ್ರಾಪುರ ಮಠಕ್ಕೆ 14 ಎಕರೆ ಜಮೀನು ದಾನ ನೀಡಿದರು.

Leave a Comment