ತಳಿಸಂಕರ ವಿರುದ್ಧ ಜನಾಂದೋಲನ: ರಾಘವೇಶ್ವರ ಶ್ರೀ
* ಅಭಯಾಕ್ಷರಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಹಿ – ಗೋಸಂದೇಶ
* ನಿವೃತ್ತ ಐಜಿಪಿ, ಕೆ.ವಿ.ರವೀಂದ್ರನಾಥ್ ಠ್ಯಾಗೋರ್, ಅಸ್ಸಾಂನ ದಿಲೀಪ್ ಕುಮಾರ್ ದಾಸ್ ಉಪಸ್ಥಿತಿ
ಬೆಂಗಳೂರು: ಗೋಹತ್ಯೆ ಮತ್ತು ತಳಿಸಂಕರಗಳ ಎಡಕತ್ತರಿಯಿಂದ ಇಡೀ ಗೋವಂಶಕ್ಕೆ ಅಪಾಯ ಬಂದಿದೆ. ಈ ಎರಡು ಪಿಡುಗುಗಳ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಬದ್ಧ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.
ಜಯನಗರದಲ್ಲಿ ಆಯೋಜಿಸಿದ್ದ ಅಭಯಾಕ್ಷರ- ಹಾಲುಹಬ್ಬ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಇಂಥ ತಳಿಸಂಕರದಿಂದ ಭಾರತದ ಅಪೂರ್ವ ತಳಿಗಳು ನಾಶವಾಗುವ ಭೀತಿ ಇದೆ. ಕಳೆದುಹೋದ ತಳಿಗಳನ್ನು ಮರಳಿ ಉತ್ಪಾದಿಸಲಾಗದು. ರಾಜ್ಯದ ಜನತೆಯ ಆತಂಕವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಪ್ರಯತ್ನವೇ ಅಭಯಾಕ್ಷರ ಆಂದೋಲನ ಎಂದು ವಿವರಿಸಿದರು.
ಕಟುಕರ ಪಾಲಾಗುವ ಗೋವುಗಳನ್ನು ರಕ್ಷಿಸುವ ಸಲುವಾಗಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ, ಅವುಗಳನ್ನು ಖರೀದಿಸಿ ಪೋಷಿಸುವ ವಿಶಿಷ್ಟ ಗೋಸಂಜೀವಿನಿ ಎಂಬ ಯೋಜನೆಯನ್ನು ಶ್ರೀಮಠ ಹಮ್ಮಿಕೊಂಡಿದೆ. ಇಂಥ ಗೋವುಗಳನ್ನು ರಕ್ಷಿಸುವ ಸಲುವಾಗಿ ಪರ್ಯಾಯ ಜಾನುವಾರು ಜಾತ್ರೆಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವುದಾಗಿ ಘೋಷಿಸಿದರು. ಇದಕ್ಕೆ ಸಮಾಜ ಧನಾತ್ಮಕವಾಗಿ ಸ್ಪಂದಿಸುವ ಮೂಲಕ ಗೋಮಾತೆಗೆ ಎದುರಾಗಿರುವ ಆತಂಕ ದೂರಮಾಡಬೇಕು ಎಂದು ಸೂಚಿಸಿದರು.
ಕಳೆದ ವರ್ಷ 7.4 ಕೋಟಿ ಕೃತಕ ಗರ್ಭಧಾರಣೆಯಾಗಿದೆ. ಇದು 10 ಕೋಟಿ ಆಗಬೇಕು ಎಂದು ಕೇಂದ್ರ ಸರ್ಕಾರ ಗುರಿ ನೀಡಿದೆ. ಇದು ಜಾರಿಯಾದಲ್ಲಿ, ಭಾರತದಾದ್ಯಂತ ಕೃತ್ರಿಮ ಗೋವುಗಳೇ ಇರುತ್ತವೆ. ಅವುಗಳ ಸಹಜತೆ ಉಳಿಸುವ ಸಲುವಾಗಿ ತಳಿಸಂಕರವನ್ನು ವಿರೋಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಗೋವಿನ ಸಹವಾಸ ಸುಖವನ್ನು ಸಮಾಜ ಅನುಭವಿಸುವಂತಾಗಬೇಕು. ಗೋವಿನ ಸಹಜತೆ ಉಳಿಯಬೇಕು. ಆದ್ದರಿಂದ ತಳಿಸಂಕರದ ಸವಾಲನ್ನು ಸಂಘಟಿತವಾಗಿ ಎದುರಿಸೋಣ ಎಂದು ಕರೆ ನೀಡಿದರು.
ಗೋಸೇವೆ, ಗೋವು ಹಾಗೂ ನಂದಿಯ ಪ್ರವೇಶದಿಂದ ಎಂಥ ಸಂಕಷ್ಟಗಳೂ ದೂರವಾಗುತ್ತವೆ ಎನ್ನುವುದಕ್ಕೆ ಶ್ರೀರಾಮಚಂದ್ರಾಪುರ ಮಠ ಪ್ರತ್ಯಕ್ಷ ಸಾಕ್ಷಿ. ಸಾಲು ಸಾಲು ಸವಾಲುಗಳನ್ನು ಎದುರಿಸುವ ಶಕ್ತಿ ಶ್ರೀಮಠಕ್ಕೆ ಬಂದದ್ದು ಗೋಸೇವೆಯ ಫಲದಿಂದ ಎಂದು ಬಣ್ಣಿಸಿದರು.
ಗೋವಿನ ಬಗೆಗಿನ ಪ್ರೀತಿ ಹಾಗೂ ಗೋವಿಗೆ ಎದುರಾಗಿರುವ ಆತಂಕ ಎಂಬ ಎರಡು ಭಾವಗಳಿಂದಾಗಿ ಎಲ್ಲ ಗೋಪ್ರೇಮಿಗಳು ಒಗ್ಗಟ್ಟಾಗುತ್ತಿದ್ದಾರೆ. ಜನರ ಗೋಪ್ರೇಮ ಪೊಳ್ಳುಪ್ರೀತಿ ಆಗಬಾರದು. ಗೋವಿನ ಆರೈಕೆಗೆ ಮುಂದಾಗಬೇಕು ಹಾಗೂ ಆತಂಕವಿದ್ದರೆ ಸಾಲದು; ಅದರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಅಭಯಾಕ್ಷರಕ್ಕೆ ಸಹಿ ಮಾಡಿ ಗೋಸಂದೇಶ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, “ಭಾರತೀಯ ಗೋತಳಿಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ಭಾರತದ ತಳಿವೈವಿಧ್ಯವನ್ನು ಉಳಿಸಿಕೊಳ್ಳದಿದ್ದರೆ, ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು” ಎಂದು ಎಚ್ಚರಿಸಿದರು.
ನಿವೃತ್ತ ಐಜಿಪಿ, ಕೆ.ವಿ.ರವೀಂದ್ರನಾಥ್ ಠ್ಯಾಗೋರ್ ಗೋಸಂದೇಶ ನೀಡಿ, “ಹಳ್ಳಿಯಲ್ಲಿ ಹಸು ಕಾಯುವವರ ಹೃದಯ ಶ್ರೀಮಂತಿಕೆ, ಗೋಮಾಂಸ ಭಕ್ಷಿಸುವ ಬುದ್ಧಿಜೀವಿಗಳಿಗೆ ಇಲ್ಲ. ಇವರು ಬುದ್ಧಿಜೀವಿಗಳಲ್ಲ; ದುರ್ಬುದ್ಧಿಜೀವಿಗಳು. ಇವರನ್ನು ಸಮಾಜ ದೂರ ಇಟ್ಟಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ” ಎಂದು ವಿಶ್ಲೇಷಿಸಿದರು. ಹಸುವಿನ ಮನಸ್ಸು ನಮ್ಮ ಸಂಸ್ಕøತಿಯ ವಿಶೇಷ. ಇದನ್ನು ಕಂಡುಕೊಂಡು ಬೆಳೆಸುವ ಕಾರ್ಯ ಆಗಬೇಕು ಎಂದು ಸೂಚಿಸಿದರು.
ಪ್ರಕೃತಿ ಸಮತೋಲನ ಉಳಿಸಿಕೊಳ್ಳಬೇಕಾದರೆ, ಗೋವುಗಳು ಪ್ರಕೃತಿಯ ಮಡಿಲಲ್ಲಿ ಸಹಜವಾಗಿ ಬೆಳೆಯಬೇಕು. ಮಲೆಮಹದೇಶ್ವರ ಬೆಟ್ಟದಲ್ಲಿ ಗೋವುಗಳು ಮೇಯಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಅಸ್ಸಾಂನ ದಿಲೀಪ್ ಕುಮಾರ್ ದಾಸ್ ಮಾತನಾಡಿ, ಅಭಯಾಕ್ಷರ- ಹಾಲುಹಬ್ಬದಿಂದ ಪ್ರೇರಣೆ ಪಡೆದು ಅಸ್ಸಾಂನಲ್ಲೂ ಹಸ್ತಾಕ್ಷರ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಹಾಗೂ ತಮ್ಮ ಸ್ವಯಂಸೇವಾ ಸಂಸ್ಥೆ ಮೂಲಕ ರಾಜ್ಯದ ಪ್ರತಿ ಮನೆಯಲ್ಲಿ ಒಂದೊಂದು ಹಸು ಸಾಕಲು ಪ್ರೇರೇಪಿಸುವುದಾಗಿ ಭರವಸೆ ನೀಡಿದರು.
ಅಭಯಾಕ್ಷರ ಹಾಲುಹಬ್ಬ ಸಮಿತಿ ಕಾರ್ಯದರ್ಶಿ ಕೇಶವಮೂರ್ತಿ ಮಾತನಾಡಿ, ಮಕ್ಕಳಲ್ಲಿ ಗೋಪ್ರೇಮ ಮೂಡಿಸಲು ಪೋಷಕರು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು. ಗೋಆಂದೋಲನವನ್ನು ರಾಜ್ಯದ ಮೂಲೆಮೂಲೆಗೆ ತಲುಪಿಸಲು ಸಂಪೂರ್ಣ ನೆರವು ನೀಡುವುದಾಗಿ ಆಶ್ವಾಸನೆ ಕೊಟ್ಟರು.
ಸಮಾಜಸೇವಕ ಸೋಮಶೇಖರ್, ಪಾಲಿಕೆ ಸದಸ್ಯೆ ಮಾಲತಿ ಸೊಮಶೇಖರ್, ನಾಗರತ್ನ, ಲಕ್ಷ್ಮೀನಾರಾಯಣ, ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಮೋಹನ್ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Comment