* ಗುಜರಾತ್‍ನ ಅಹ್ಮದಾಬಾದ್,ಮೈಸೂರು, ಗದಗ,  ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಗ್ರಾಹಕರು

ಭಾರತೀಯ ಗೋಸಂಪತ್ತನ್ನು ಸಂರಕ್ಷಿಸುವ ಮಹದುದ್ದೇಶದ ಅಭಯ ಜಾತ್ರೆಗೆ ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.ದೇಸಿ ಹಸುಗಳ ವಹಿವಾಟಿಗೆ ಮಾತ್ರ ಇಲ್ಲಿ ಅವಕಾಶವಿದ್ದು, ಕಟುಕರಿಗೆ ಪ್ರವೇಶವಿಲ್ಲದ ದೇಶದ ಮೊಟ್ಟಮೊದಲ ಜಾನುವಾರು ಜಾತ್ರೆ ಎನಿಸಿಕೊಂಡಿದೆ. ರೈತರಿಂದ ನೇರವಾಗಿ ರೈತರು ಅಥವಾ ಅಧಿಕೃತ ಗೋಶಾಲೆಗಳಿಗಾಗಿ ಗೋವು ಖರೀದಿಸಲು ಮಾತ್ರ ಇಲ್ಲಿ ಅವಕಾಶವಿದೆ.
ಗ್ರಾಮಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಗೋಪೂಜೆ ನೆರವೇರಿಸಿ ಗೋಗ್ರಾಹ ನೀಡುವ ಮೂಲಕ ಅಭಯ ಜಾತ್ರೆಗೆ ಚಾಲನೆ ನೀಡಿದರು. ಶ್ರೀರಾಮಚಂದ್ರಾಪುರ ಮಠದ ಕಾಮದುಘ ವಿಭಾಗದ ಕಾರ್ಯದರ್ಶಿ ಡಾ. ವೈ.ವಿ. ಕೃಷ್ಣಮೂರ್ತಿ,  ಕೆಂಪಯ್ಯನಹಟ್ಟಿ ಗವ್ಯ ಉದ್ಯಮ ವಿಭಾಗದ ಮುಖ್ಯಸ್ಥ ಶಾಮಪ್ರಸಾದ್ ಬೇರ್ಕಡವು, ರೈತಮುಖಂಡ ಕೆ.ವಿ.ಸಿದ್ದಪ್ಪ, ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ಮಾದೇಶ್, ಆಂದೋಲನ ವಿಭಾಗದ ಕಾರ್ಯದರ್ಶಿ ಅಶೋಕ್ ಕೆದ್ಲ, ರಾಜ್ಯ ಗೋಪರಿವಾರದ ಮಾಧ್ಯಮ ವಿಭಾಗದ ಅಧ್ಯಕ್ಷ ಉದಯ ಶಂಕರ ಭಟ್ ಮಿತ್ತೂರು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯುವ ಈ ಅಭಯ ಜಾತ್ರೆಯಲ್ಲಿ 2000ಕ್ಕೂ ಹೆಚ್ಚು ಜಾನುವಾರುಗಳನ್ನು ಬೆಟ್ಟದ ತಪ್ಪಲಿನ ವಿವಿಧ ಗ್ರಾಮಗಳಿಂದ ರೈತರು ತಂದಿದ್ದಾರೆ. ಮೈಸೂರು, ಗದಗ, ಗುಜರಾತ್‍ನ ಅಹ್ಮದಾಬಾದ್ ಸೇರಿದಂತೆ ವಿವಿಧ ಕಡೆಗಳಿಂದ ಗ್ರಾಹಕರು ಆಗಮಿಸಿದ್ದಾರೆ. ಮಾರಾಟವಾಗದೇ ಉಳಿದ ಮುದಿ ಹಸುಗಳು ಹಾಗೂ ಅಶಕ್ತ ಹಸುಗಳನ್ನು ಶ್ರೀರಾಮಚಂದ್ರಾಪುರ ಮಠವೇ ಖರೀದಿಸಿ ಸಾಕುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ.
ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ವಿಶಿಷ್ಟ ಪರಿಕಲ್ಪನೆ ಇದಾಗಿದ್ದು, ದೇಸಿ ಗೋಸಂರಕ್ಷಣೆಯ ಉದ್ದೇಶದಿಂದಲೇ ದೇಶದಲ್ಲಿ ಜಾನುವಾರು ಜಾತ್ರೆಯೊಂದನ್ನು ಹಮ್ಮಿಕೊಳ್ಳುತ್ತಿರುವುದು ಇದೇ ಮೊದಲು.
ಮಲೆಮಹದೇಶ್ವರ ಬೆಟ್ಟಕ್ಕೆ ಸರ್ಕಾರ ಬೇಲಿ ಹಾಕಿದ ಪರಿಣಾಮ ಜಾನುವಾರುಗಳಿಗೆ ಮೇವು ಇಲ್ಲವಾಗಿದ್ದು, ಬೆಟ್ಟದ ತಪ್ಪಲಿನ ಸಾವಿರಾರು ಗೋಪಾಲಕರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಪರ್ಯಾಯ ಮೇವಿನ ವ್ಯವಸ್ಥೆ ಇಲ್ಲದೇ ಗೋಸಾಕಾಣಿಕೆಯೇ ರೈತರಿಗೆ ಕಷ್ಟಕರವಾಗಿದ್ದು, ಈ ಅಸಹಾಯಕ ಪರಿಸ್ಥಿತಿಯ ಲಾಭ ಪಡೆಯಲು ಕಸಾಯಿಖಾನೆಯವರು ಹೊಂಚು ಹಾಕಿ ಸಮಯ ಕಾಯುತ್ತಿರುವ ಹಿನ್ನೆಲೆಯಲ್ಲಿ ಅಮೂಲ್ಯ ಗೋಸಂಪತ್ತು ರಕ್ಷಣೆಗೆ ಈ ಜಾತ್ರೆ ಆಯೋಜಿಸಲಾಗಿದೆ.
ತಮಿಳುನಾಡಿನ ಗಡಿಭಾಗದ ಈರೋಡ್ ಜಿಲ್ಲೆ ಅಂದಿಯೂರಿನಲ್ಲಿ ನಡೆಯುವ ವಾರ್ಷಿಕ ಜಾನುವಾರು ಜಾತ್ರೆಯಲ್ಲಿ ಹೀಗೆ ಸಾವಿರಾರು ಗೋವುಗಳು ಕಟುಕರ ಪಾಲಾಗುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಶ್ರೀರಾಮಚಂದ್ರಾಪುರ ಮಠ ಹಾಗೂ ಮಲೆಮಹದೇಶ್ವರ ಗೋಪರಿವಾರದ ಸಂಯುಕ್ತ ಆಶ್ರಯದಲ್ಲಿ ಈ ಜಾತ್ರೆ ಆಯೋಜಿಸಲಾಗಿತ್ತು.
ಈ ಭಾಗದಲ್ಲಿ ಅಪರೂಪದ ಬರಗೂರು, ಹಳ್ಳಿಕಾರ್ ಹಾಗೂ ಆಲಂಬಾಡಿ ಗೋ ತಳಿಗಳು ಕಟುಕರ ಪಾಲಾಗದೇ ರೈತರಿಂದ ರೈತರ ಮನೆಗೇ ತಲುಪಬೇಕು ಎಂಬ ಉದ್ದೇಶದಿಂದ ಈ ಅಭಯ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.
ಈ ಜಾತ್ರೆಯಲ್ಲಿ ಭಾರತೀಯ ಗೋ ತಳಿಯ ಗೋವುಗಳಿಗೆ ಮಾತ್ರ ಅವಕಾಶವಿದೆ. ಖರೀದಿಸಿದ ಗೋವುಗಳನ್ನು ರೈತರಲ್ಲದೇ ಬೇರಾರಿಗೂ ಮಾರಾಟ ಮಾಡುವಂತಿಲ್ಲ. ಗೋವು ಖರೀದಿಸಿ ಸಾಕಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿಪುನಃ ಶ್ರೀಮಠದ ಗೋಬ್ಯಾಂಕಿಗೇ ನೀಡಬೇಕು ಹಾಗೂ ಕೃತಕ ಗರ್ಭಧಾರಣೆ ಮಾಡಿಸುವಂತಿಲ್ಲ ಎಂಬ ಷರತ್ತುಗಳೊಂದಿಗೆ ಇಲ್ಲಿ ಜಾನುವಾರು ವಹಿವಾಟು ನಡೆಯುತ್ತದೆ. ಜಾತ್ರೆಯಲ್ಲಿ ಭಾಗವಹಿಸಿ ಗೋವುಗಳನ್ನು ಖರೀದಿಸುವವರು ಕೃಷಿಕ ಅಥವಾ ಗೋಶಾಲೆಗೆ ಸಂಬಂಧಿಸಿದ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿರಬೇಕು.

Leave a Comment